ನಿಕ್ಕಂ, ಎನ್ ಎ
	1903-1974. ನಾರಾಯಣರಾವ್ ಅಪ್ಪೂರಾವ್ ನಿಕ್ಕಂ ಪ್ರಸಿದ್ಧ ತತ್ತ್ವಶಾಸ್ತ್ರ ಪ್ರಾಧ್ಯಾಪಕರು. ಹುಟ್ಟಿದ್ದು 1903ರ ಮೇ 5ರಂದು, ಮಂಡ್ಯ ಜಿಲ್ಲೆ ಮದ್ದೂರು ತಾಲ್ಲೂಕು ಕೆಸ್ತೂರು ಗ್ರಾಮದಲ್ಲಿ. ಮೈಸೂರಿನ ಮಹಾರಾಜ ಕಾಲೇಜಿನಲ್ಲಿ ಓದಿ ತತ್ತ್ವಶಾಸ್ತ್ರದಲ್ಲಿ ಬಿ.ಎ. ಪದವೀಧರರದರು. ವಿವಾಹವಾದ್ದು 1929ರಲ್ಲಿ. ತತ್ತ್ವಶಾಸ್ತ್ರದಲ್ಲಿ ಎಂ.ಎ. ಪರೀಕ್ಷೆ ಮಾಡಿ ಬಾಬಾ ಸ್ಮಾರಕ ಸುವರ್ಣಪದಕವನ್ನು ಪಡೆದರು (1930). ಅದೇ ವರ್ಷ ಮೈಸೂರು ಸಂಸ್ಥಾನದ (ಈಗ ಕರ್ನಾಟಕ ರಾಜ್ಯ) ದಾಮೋದರ್ ದಾಸ್ ವಿದೇಶಿ ವಿದ್ಯಾರ್ಥಿ ವೇತನ ಪಡೆದು ಉಚ್ಚ ಶಿಕ್ಷಣ ಪಡೆಯಲು (ಕೇಂಬ್ರಿಜ್ಜಿನ ಸೇಂಟ್ ಜಾನ್ ಕಾಲೇಜಿನಲ್ಲಿ) ಇಂಗ್ಲೆಂಡಿಗೆ ತೆರಳಿ ತತ್ತ್ವಶಾಸ್ತ್ರದ ಪ್ರೌಢಪರೀಕ್ಷೆಯಲ್ಲಿ ಉತ್ತೀರ್ಣರಾದರು.

	ನಿಕ್ಕಂ ಅವರ ಶಿಕ್ಷಣವೃತ್ತಿ ಚಾಮರಾಜನಗರದಲ್ಲಿ ಶಾಲಾ ಮಕ್ಕಳಿಗೆ ಬೋಧಿಸುವುದರೊಂದಿಗೆ ಪ್ರಾರಂಭ. ತರುವಾಯ ಬೆಂಗಳೂರಿನ ಕೋಟೆ ಹೈಸ್ಕೂಲಿನಲ್ಲಿ ಉಪಾಧ್ಯಾಯರಾದರು; ಕಾಲೇಜಿನಲ್ಲಿ ಮೊದಲ ನೌಕರಿ ಕೊಲ್ಲಾಪುರದ ರಾಜಾರಾಂ ಕಾಲೇಜಿನಲ್ಲಿ. ಆರುವರ್ಷಗಳ ಅನಂತರ ಬೆಂಗಳೂರು ಮಹಾರಾಣಿ ಕಾಲೇಜಿನ ತತ್ತ್ವಶಾಸ್ತ್ರ ವಿಭಾಗದ ಮುಖ್ಯಸ್ಥ ಹಾಗೂ ಸಹಾಯಕ ಪ್ರಾಧ್ಯಾಪಕರಾಗಿ ನೇಮಕಗೊಂಡರು (1944-55). ಆ ವೇಳೆಯಲ್ಲಿ ಫುಲ್‍ಬ್ರೈಟ್ ಮತ್ತು ಫೋರ್ಡ್ ಫೌಂಡೇಶನ್ ವ್ಯಾಸಂಗವೇತನ ಪಡೆದು 1952-53ರಲ್ಲಿ ಅಮೆರಿಕದ ಯೇಲ್ ವಿಶ್ವವಿದ್ಯಾನಿಲಯದ ಸೆಲಿಮನ್ ಕಾಲೇಜಿನ ಪಂಡಿತ ಸಭೆಯ ಸಹಸದಸ್ಯರಾಗಿದ್ದರು. 1955ರಲ್ಲಿ ಮೈಸೂರಿನ ಮಹಾರಾಜ ಕಾಲೇಜಿನಲ್ಲಿ ತತ್ತ್ವಶಾಸ್ತ್ರ ಹಾಗೂ ಸಮಾಜಶಾಸ್ತ್ರ ವಿಭಾಗದ ಮುಖ್ಯಸ್ಥರೂ ಪ್ರಾಧ್ಯಾಪಕರೂ ಆದರು. ಭಾರತೀಯ ಧರ್ಮಶಾಸ್ತ್ರ ಹಾಗೂ ದರ್ಶನಗಳ ಬಗ್ಗೆ ನಿಕ್ಕಂ ಅವರ ಪಾಂಡಿತ್ಯ ಪಾಶ್ಚಾತ್ಯ ದಾರ್ಶನಿಕರ ಗಮನವನ್ನು ಸೆಳೆಯಿತು. ನಿಕ್ಕಂ 12 ವರ್ಷಗಳ ಕಾಲ (1949-61) ಭಾರತೀಯ ದಾರ್ಶನಿಕ ಪರಿಷತ್ತಿನ ಕಾರ್ಯದರ್ಶಿಯಾಗಿದ್ದು, ಯುನೆಸ್ಕೊ ಸಂಸ್ಥೆಯ ಯೋಜನೆಯ ಪ್ರಕಾರ ಎರಡು ಚಕ್ರಗೋಷ್ಠಿಗಳನ್ನು ಏರ್ಪಡಿಸಿದರು. ಈ ಪರಿಷತ್ತಿನ ದೆಹಲಿ ಅಧಿವೇಶನಕ್ಕೆ (1965) ನಿಕ್ಕಂ ಅಧ್ಯಕ್ಷರಾಗಿ ನೇಮಕವಾದರು. ಅಂತರರಾಷ್ಟ್ರೀಯ ದಾರ್ಶನಿಕ ಸಂಸ್ಥೆಯ ಚುನಾಯಿತ ಸದಸ್ಯರಾಗಿ ಅಥೆನ್ಸ್, ವಾರ್ಸಾ, ಪ್ಯಾರಿಸ್, ಸಾಂತಾ ಬಾರ್ಬರಾ, ಮೈಸೂರು, ಆ್ಯಮ್ಸಟರ್‍ಡ್ಯಾಂ, ಹೈಡೆಲ್‍ಬರ್ಗ್, ಆಕ್ಸ್‍ಫರ್ಡ್ ಮತ್ತು ಕೇಂಬ್ರಿಜ್- ಈ ಸ್ಥಳಗಳಲ್ಲಿ ನಡೆದ ಸಮ್ಮೇಳನಗಳಲ್ಲಿ ಭಾಗವಹಿಸಿದರು. 1958ರಲ್ಲಿ ವೆನಿಸ್ ಪಟ್ಟಣದಲ್ಲಿ ನಡೆದ ಎಂಟನೆಯ ಅಂತರರಾಷ್ಟ್ರೀಯ ಒಕ್ಕೂಟದ ಆಡಳಿತ ಸಮಿತಿಯ ಸದಸ್ಯರಾಗಿ ಎರಡು ಬಾರಿ ಚುನಾಯಿತರಾದರು. ಯುನೆಸ್ಕೊ ಸದಸ್ಯರಾಷ್ಟ್ರಗಳಲ್ಲಿ ತತ್ತ್ವಶಾಸ್ತ್ರ, ಶಿಕ್ಷಣದ ಪರಿಶೀಲನೆ ಮತ್ತು ಮಾನವ ಹಕ್ಕುಗಳ ಸಂಬಂಧವಾದ ಪತ್ರಗಳ ಆಧಾರಗ್ರಂಥ ತಯಾರಿಕೆ- ಇವುಗಳ ಬಗ್ಗೆ ಯುನೆಸ್ಕೊ ಸಂಸ್ಥೆ ಏರ್ಪಡಿಸಿದ ಉಪ ಆಯೋಗಗಳಲ್ಲಿ ಸದಸ್ಯರಾಗಿದ್ದರು. ಅಮೆರಿಕದ ದಾರ್ಶನಿಕ ಸಂಘ, ಇಂಗ್ಲೆಂಡಿನ ಅರಿಸ್ಟಾಟಲ್ ಪಂಥದ ಸಂಘ, ನ್ಯೂಯಾರ್ಕಿನ ನೀತಿಶಾಸ್ತ್ರ ಸಂಘ, ಭಾರತದ ಪಿ.ಇ.ಎನ್.ಸಂಘ, ಬೆಂಗಳೂರಿನ ಇನ್‍ಸ್ಟಿಟ್ಯೂಟ್ ಆಫ್ ವಲ್ರ್ಡ್ ಕಲ್ಚರ್, ಅಮೆರಿಕದ ರಾಷ್ಟ್ರೀಯ ಶಿಕ್ಷಣ ಸಂಸ್ಥೆ-ಇವುಗಳ ಸದಸ್ಯರಾಗಿದ್ದರು. ಮೈಸೂರು ವಿಶ್ವವಿದ್ಯಾಲಯದ ಕುಲಪತಿಯಾಗಿ ನಿಕ್ಕಂ ಅವರ ನೇಮಕವಾದ್ದು 1960ರಲ್ಲಿ.

	ನಿಕ್ಕಂ ಉತ್ತಮ ಚಿಂತಕರಾಗಿದ್ದರು. ಭಾರತ ಸಂಸ್ಕøತಿಯ ಕೆಲವು ಕಲ್ಪನೆಗಳು, ಶುದ್ಧ ಪ್ರಜ್ಞೆಯ ಬಗ್ಗೆ ಕಾಂಟನ ವಿಮರ್ಶೆಗೆ ಒಂದು ಪ್ರಸ್ತಾವನೆ, ಬುದ್ಧಿ ಅರಿವು ಮತ್ತು ಸಹಜ ಪ್ರಜ್ಞೆ, ಉಪನಿಷತ್ತಿನ ಬೋಧಕರು, ರಮಣ ಮಹರ್ಷಿ-ಅಧ್ಯಾತ್ಮ ಯೋಗದ ಒಂದು ಅಧ್ಯಯನ, ಹತ್ತು ಪ್ರಧಾನ ಉಪನಿಷತ್ತುಗಳು; ಗಾಂಧಿಯವರ ಧರ್ಮ ಸಾಕ್ಷಾತ್ಕಾರ-ಇವು ನಿಕ್ಕಂ ಅವರ ಕೆಲವು ಗ್ರಂಥಗಳು. ಸಾಯುವ ವೇಳೆಗೆ ಇವರು ಪತಂಜಲಿಯ ಯೋಗಸೂತ್ರಗಳ ಮೂರು ಅಧ್ಯಾಯಗಳನ್ನು ರಚಿಸಿದ್ದರು. ಹಲವಾರು ದಾರ್ಶನಿಕ ಸಂಸ್ಥೆಗಳ ಹಾಗೂ ದಾರ್ಶನಿಕ ಸಮ್ಮೇಳನಗಳ ಪ್ರಕಟಣೆಗಳಿಗೆ ಇವರು ಸಂಪಾದಕರಾಗಿದ್ದರು. ಅಂತರರಾಷ್ಟ್ರೀಯ ದಾರ್ಶನಿಕ ಸಂಸ್ಥೆಯವರು ಶಾಂತಿಸಾಧನೆಗೆ ಮಾನವ ಕುಲದ ಮೇಲೆ ಪ್ರಭಾವ ಬೀರಿದ ಗ್ರಂಥಗಳು ಎಂಬ ಮಾಲಿಕೆಯಲ್ಲಿ ಪ್ರಕಟಿಸಿದ ಅಶೋಕನ ಧರ್ಮ ಶಾಸನಗಳು (ಶಿಕಾಗೊ ವಿಶ್ವವಿದ್ಯಾನಿಲಯ, 1959) ಎಂಬ ಗ್ರಂಥಕ್ಕೆ ಇವರು ಸಂಪಾದಕರಾಗಿದ್ದರು.
(ಎಸ್.ಎನ್‍ಐ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ